ಅರಸರ ಸಂಪ್ರದಾಯಗಳು – ಒಂದು ವಿಶ್ಲೇಷಣೆ – ಡಾ. ಎಂ. ಸುಶೀಲ ಅರಸ್

ಅರಸುಗಳು ವೈದಿಕ ಸಂಪ್ರದಾಯದವರೇ? ಹೌದು, ಅಲ್ಲ. ಜಿಜ್ಞಾಸೆಯಿದೆ. ಹೌದು ಅಥವಾ ಅಲ್ಲ ಎಂದು ಹೇಳಬೇಕಾದರೆ, ಎರಡು ವಿಷಯಗಳನ್ನು ಸ್ಥೂಲವಾಗಿ ಅಧ್ಯಯನ ಮಾಡಬೇಕಾಗುತ್ತದೆ.
ಒಂದು, ವೈದಿಕ ಸಂಪ್ರದಾಯವೆಂದರೇನು? ಅದನ್ನು ಅನುಸರಿಸುವರು ಯಾರು? ಅದು ನಡೆದ ಬಂದ ರೀತಿ ಏನು?

ಮತ್ತೊಂದು, ವೈದಿಕ ಸಂಪ್ರದಾಯ ಬ್ರಾಹ್ಮಣರದ್ದು ಮಾತ್ರ ಎಂದಾದರೆ, ವೈದಿಕ ಧರ್ಮ ಒಂದು ಸಂಕುಚಿತ ಧರ್ಮವೇ? ಭಾರತೀಯ ಜನತೆಗೆ ಅದರ ಮೇಲೆ ಒಲವಿಲ್ಲವೆ? ಹಿಂದೂ ಸಂಸ್ಕೃತಿಯ ಭವ್ಯ ಪರಂಪರೆಯೇನು? ಈ ವಿಷಯಗಳನ್ನು ಸ್ವಲ್ಪಮಟ್ಟಿಗಾದರೂ ತಿಳಿಯಬೇಕಾಗುತ್ತದೆ. ಇದನ್ನು ತಿಳಿದಾಗ ಮಾತ್ರ ನಮ್ಮ ಧಾರ್ಮಿಕ ಪರಂಪರೆಯ ಅರಿವು ನಮಗಾಗುತ್ತದೆ.

ವೈದಿಕ ಸಂಪ್ರದಾಯವೆಂದರೆ, ಬ್ರಾಹ್ಮಣರಿಂದ ಪ್ರಾರಂಭವಾದರೂ ಅವರು ಮಾತ್ರ ಅನುಸರಿಸುವ ಸಂಪ್ರದಾಯವಾಗಿ ಉಳಿದಿಲ್ಲ. ವೈದಿಕ ಸಂಪ್ರದಾಯಗಳೊಂದಿಗೆ, ವೈಷ್ಣವ ಸಂಪ್ರದಾಯ, ಶೈವ ಸಂಪ್ರದಾಯ, ಜನಪದ ಸಂಪ್ರದಾಯಗಳು ಕಾಲಾನುಕಾಲಕ್ಕೆ ಒಂದಕ್ಕೊಂದು ಹೆಣೆದುಕೊಂಡು, ಒಂದು ಮತ್ತೊಂದು ಸಂಪ್ರದಾಯಕ್ಕೆ ಪೂರಕವೇನೋ ಎನ್ನುವ ರೀತಿಯಲ್ಲಿ ಬೆಳೆಯಿತು. ಅದೇ ವೈದಿಕರೇ ಕ್ಷತ್ರಿಯರಿಗೆ ಉಪನಯನದ ಹಕ್ಕನ್ನು ಕೊಡಿಸಿ, ಅವರನ್ನು ದ್ವಿಜರೆಂದು ಕರೆದು ವೈದಿಕ ಸಂಪ್ರದಾಯವನ್ನು ಅನುಸರಿಸಲು ಸ್ವಾಗತಿಸಿದರು. ರಾಜನಾದವನು ತನ್ನ ರಾಜ್ಯ ಹಾಗೂ ಪ್ರಜೆಗಳ ಅಭಿವೃದ್ಧಿಗಾಗಿ ಎಲ್ಲ ಧರ್ಮಗಳನ್ನು ಸಮಾನ ದೃಷ್ಟಿಯಿಂದ ಕಾಣಬೇಕಾದುದು ಅನಿವಾರ್ಯವಾದಾಗ ಎಲ್ಲಾ ಧರ್ಮಗಳ ಹಾಗೂ ಜನಪದ ಸಂಪ್ರದಾಯಗಳ ಸಮ್ಮಿಲನಕ್ಕೆ ಅವಕಾಶವನ್ನು ಮಾಡಿಕೊಡಬೇಕಾಯಿತು.

ಭಾರತೀಯ ಜನಗೆ ಆಚರಿಸುವ ಸಂಪ್ರದಾಯಗಳೇ ಸಂಸ್ಕೃತಿ ಎಂಬ ಪದವಾಗಿ, ಬಹಳ ವಿಶಾಲಾರ್ಥದಲ್ಲಿ ಬಳಕೆ ಇದೆ. ಇಂದು, ಸಂಸ್ಕೃತಿ ಎನ್ನುವ ಪದದ ಅರ್ಥ ಬಹಳ ವ್ಯಾಪಕವಾಗಿ ಬೆಳೆದು ಮಾನವ ಸಮುದಾಯದ ಸಂಪ್ರದಾಯಗಳಿಂದ ಹಿಡಿದು ವೈಯುಕ್ತಿಕ ಆಚರಣೆಗಳವರೆಗೂ ಹರಡಿದೆ. ಭಾರತೀಯ ಸಂಸ್ಕೃತಿ ಎಂದರೆ ವೈದಿಕ ಸಂಸ್ಕೃತಿಯೆಂದೇ. ಅಲ್ಲಿ ವೈದಿಕ ಸಂಸ್ಕೃತಿಗಿಂತ ಪ್ರಾಚೀನವಾದ ಸಂಸ್ಕೃತಿ ಇದ್ದಿತು. ಅದನ್ನು ದೇಸಿ ಅಥವಾ ಜನಪದ ಸಂಸ್ಕೃತಿ ಎಂದು ಗುರುತಿಸಲಾಗಿದೆ. ಈ ದೇಶದ ಜನ ಅದರಲ್ಲೂ ಕರ್ನಾಟಕದ ಜನ ಬಹು ಸಂಸ್ಕೃತಿಯಲ್ಲಿ ಬೆಳೆದವರು.ಹಾಗೂ ಬದುಕಿದವರು. ಒಂದೊಂದು ಸಂಸ್ಕೃತಿಯೂ ಅನನ್ಯವೇ. ಆದರೆ ವೈದಿಕ ಸಂಸ್ಕೃತಿಯ ಎದುರು ಅದು ಕೀಳರಿಮೆಗೆ, ನಿರ್ಲಕ್ಷ್ಯಕ್ಕೆ ಗುರಿಯಾಯಿತು. ವೈದಿಕ ಸಂಸ್ಕೃತಿಯ ಪ್ರಾಬಲ್ಯ ಎಷ್ಟರಮಟ್ಟಿಗೆ ಇತ್ತೆಂದರೆ, ದೇಸಿ ಅಥವಾ ಜನಪದ ಸಂಸ್ಕೃತಿಯನ್ನು ಕುರಿತು ಮಾತನಾಡುವುದು ನಾಚಿಕೆಯ ಸಂಗತಿ ಎಂಬ ಭಾವನೆಯನ್ನು ಜನಮನದಲ್ಲಿ ಮೂಡಿಸಿತು. ಏಕೆಂದರೆ ಅದು ಯಜಮಾನ ಅಥವಾ ಆಳುವ ಸಂಸ್ಕೃತಿಯಾಗಿತ್ತು. ಭಾರತದಲ್ಲಿ ಅನಾದಿ ಕಾಲದಿಂದಲೂ ಒಂದು ವರ್ಗ (ಅಲ್ಪ ಸಂಖ್ಯಾತ) ಆಳ್ವಿಕೆ ನಡೆಸುತ್ತಿತ್ತು. ಇದೇ ವರ್ಗ ವೈದಿಕ ಸಂಸ್ಕೃತಿಯ ನೇತಾರರು ನಾವೇ ಎನ್ನುವ ದುರಭಿಮಾನವನ್ನು ಹೊಂದಿದ್ದರು.

ಇದೇ ಅರ್ಥದಲ್ಲಿ ಸಂಸ್ಕೃತಿಯನ್ನು ಶಿಷ್ಟ ಮತ್ತು ಜನಪದ ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಶಿಷ್ಟ ಸಂಸ್ಕೃತಿಯನ್ನು ವಿಶಾಲ (ಬೃಹತ್) ಸಂಸ್ಕೃತಿಯೆಂದೂ , ಪ್ರೌಢ ಸಂಸ್ಕೃತಿಯೆಂದೂ, ಜನಪದ ಸಂಸ್ಕೃತಿಯು ಸ್ಥಳೀಯ ಸಂಸ್ಕೃತಿಯೆಂದೂ, ನೈಸರ್ಗಿಕ ಆಚಾರ ವಿಚಾರಗಳು, ನಡೆನುಡಿಗಳು, ನಂಬಿಕೆಗಳು ಮೊದಲಾದವುಗಳನ್ನು ತನ್ನಲ್ಲಿ ಮೈಗೂಡಿಸಿಕೊಂಡು ಜನಮನದಲ್ಲಿ ಬಹಳ ಕಾಲ ಉಳಿಯಬಲ್ಲ ಸಂಸ್ಕೃತಿಯಾಗಿದೆ. ನಮ್ಮಲ್ಲಿ ಅನೇಕ ಜನಾಂಗಗಳು ಆಚರಿಸುವ ವಿವಿಧ ಆಚರಣೆಗಳು, ಪದ್ಧತಿಗಳು, ನಂಬಿಕೆಗಳು ಜನಪದ ಸಂಸ್ಕೃತಿಯ ಪ್ರತೀಕವಾದರೂ, ಕಾಲಧರ್ಮಕ್ಕನುಗುಣವಾಗಿ ಶಿಷ್ಟ ಸಂಪ್ರದಾಯದ ಪ್ರಭಾವಕ್ಕೊಳಗಾಗುತ್ತಿವೆ.

ಪ್ರೌಢ ಧರ್ಮಗಳು, ಧರ್ಮ ಗುರುಗಳಿಂದ, ಧರ್ಮ ಗ್ರಂಥಗಳಿಂದ ನಿಯಂತ್ರಿಸಲ್ಪಟ್ಟರೆ, ನೈಸರ್ಗಿಕ ಧರ್ಮಗಳು ತಂತಮ್ಮ ಪ್ರಾಚೀನ ಕುಲ ಕಸುಬುಗಳನ್ನು, ಆಚಾರ ವಿಚಾರಗಳನ್ನು ನಂಬಿಕೆ, ಸಂಪ್ರದಾಯಗಆಳನ್ನು ಅವಲಂಬಿಸಿ, ಯಾರ ಹಿಡಿತಕ್ಕೂ ಸಿಗದೆ, ಸ್ವಚ್ಛಂದವಾಗಿ ಬೆಳೆದಿರುತ್ತದೆ.

ಕರ್ನಾಟಕದಲ್ಲಿ 15 ಮತ್ತು 16ನೇ ಶತಮಾನದಲ್ಲಿ ಉಂಟಾದ ರಾಜಕೀಯ ಬೆಳವಣಿಗೆ, ವೀರಶೈವ ಚಳವಳಿ, ಅನ್ಯಧರ್ಮಗಳ ಪ್ರಭಾವ, ಶಿಷ್ಟ ಸಂಸ್ಕೃತಿಯ ಮೇಲೆ ಮಹತ್ತರ ಪರಿಣಾಮವನ್ನುಂಟುಮಾಡಿತು. ವಿಶಾಲ ಸಾಮ್ರಾಜ್ಯಗಳು ಸಿಡಿದು ಚೂರಾಗಿ ಸಣ್ಣ ಸಣ್ಣ ರಾಜ್ಯಗಳು ತಲೆ ಎತ್ತಿದ ಹಿನ್ನೆಲೆಯಲ್ಲಿ ಶಿಷ್ಟ ಸಂಸ್ಕೃತಿಯು, ಪ್ರಾದೇಶಿಕ ಸಂಸ್ಕೃತಿಯೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಳ್ಳಲು ಹವಣಿಸಿತು. ಯಜಮಾನ ಸಂಸ್ಕೃತಿಯು ಸೇವಕ ಸಂಸ್ಕೃತಿಗೆ ಮಣಿದು, ತಾನು ಹಿಂದಕ್ಕೆ ಸರಿದು, ಸೇವಕ ಸಂಸ್ಕೃತಿಗೆ ಪ್ರಾಧಾನ್ಯತೆಯನ್ನು ಕೊಟ್ಟಿತು. ವೈದಿಕ ಸಂಸ್ಕೃತಿಯ ಹರಿವು ಬಹಳಷ್ಟು ವಿಶಾಲವಾಗಿಯೂ, ಪ್ರಭಾವವಾಗಿಯೂ ಇದ್ದರೂ, ಹಲವಾರು ಸಂಪ್ರದಾಯಗಳಲ್ಲಿ ನೈಸರ್ಗಿಕ ಸಂಸ್ಕೃತಿ ತನ್ನ ಸ್ವತಂತ್ರವಾದ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವುದನ್ನು ಕಾಣಬಹುದು. ವಿವಾಹ ಪದ್ಧತಿಗಳು, ಕುಟುಂಬ ವ್ಯವಸ್ಥೆ, ಸಾಮಾಜಿಕ ಸಂಪ್ರದಾಯಗಳು, ಧಾರ್ಮಿಕ ನಂಬಿಕೆಗಳು, ಆಯಾ ಸಂಸ್ಕೃತಿಯ ವಿಶಿಷ್ಟ ಅಂಶಗಳನ್ನು ಪ್ರತ್ಯೇಕಿಸಿ ತೋರಿಸುತ್ತವೆ. ಸೂಕ್ಷ್ಮವಾಗಿ ಗಮನಿಸಿದಾಗ, ನೈಸರ್ಗಿಕ ಸಂಸ್ಕೃತಿಯ ಪ್ರಭಾವ ಕೆಳಹಂತದ ಆದಿವಾಸಿಗಳಲ್ಲಿ ದಟ್ಟವಾಗಿಯೂ, ಗ್ರಾಮೀಣದಲ್ಲಿ ಪ್ರಭಾವವಾಗಿಯೂ, ನಗರವಾಸಿಗಳಲ್ಲಿ ಅತಿ ತೆಳುವಾಗಿಯೂ ಕಂಡು ಬರುತ್ತದೆ. ಶಿಷ್ಟ ಸಂಸ್ಕೃತಿ ಗ್ರಾಮೀಣ ಸಮಾಜದಲ್ಲಿ ನೈಸರ್ಗಿಕ ಸಂಸ್ಕ್ರೃತಿಯ ಬೇರುಗಳನ್ನು ಸಡಿಲಿಸಿದ್ದರೆ, ನಾಗರಿಕ ಸಮಾಜ ಶಿಷ್ಟ ಸಂಸ್ಕೃತಿಯ ನೆರಳಿನಲ್ಲಿಯೇ ನೆಲೆಯೂರಿದೆ.

ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ಅರಸುಗಳು ವೈದಿಕ ಸಂಪ್ರದಾಯವನ್ನು ಮತ್ತು ಜನಪದ ಸಂಪ್ರದಾಯಗಳೆರಡನ್ನು ಹದವಾಗಿ ಬೆರೆಸಿ, ಅನುಸರಿಸುತ್ತಾ ನಿಜವಾದ ಅರ್ಥದಲ್ಲಿ ಸಮನ್ವಯವನ್ನು ಸಾಧಿಸಿದ್ದಾರೆ. ಮೈಸೂರು ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಒಡೆಯರ ಮನೆತನದವರು ಇಂತಹುದೇ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದಾರೆ. ಮೂಲತಃ ಒಡೆಯರು ಶೈವರಾಗಿದ್ದು, ಕಾಲಕಾಲಕ್ಕೆ ರಾಜ್ಯದ ಮೇಲೆ ಉಂಟಾದ ಧರ್ಮಗಳ ಪ್ರಭಾವಕ್ಕೆ ಸಿಲುಕಿ, ಎಲ್ಲಾ ಧರ್ಮಗಳ ಸಂಪ್ರದಾಯಗಳನ್ನು ತಮ್ಮಲ್ಲಿ ಅಳವಡಿಸಿಕೊಂಡರು. ಆಳ್ವಿಕೆ ನಡೆಸಿದ ಅರಸರಿಗೆ, ರಾಜಕೀಯ ಹಾಗೂ ಸಾಮಾಜಿಕ ಒತ್ತಡಗಳಿಂದ ಇನ್ನಿತರ ಸಂಪ್ರದಾಯಗಳನ್ನು ಓಲೈಸುವುದು ಅನಿವಾರ್ಯವಾಗಿತ್ತು.

ರಾಜ ಒಡೆಯರು 1610 ರಲ್ಲಿ ವಿಜಯನಗರ ಮಂಡಲಾಧಿಪತಿಯಿಂದ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡ ಮೇಲೆ ಆ ಸೀಮೆಯು ವೈಷ್ಣವ ನೆಲೆಯಾಗಿದ್ದರಿಂದ ರಾಜಕೀಯ ದೃಷ್ಟಿಯಿಂದ ವೈಷ್ಣವ ಧರ್ಮಕ್ಕೆ ಒಲವು ತೋರಿದುದು ಅನಿವಾರ್ಯವಾಗಿತ್ತು. ಶ್ರೀ ವೈಷ್ಣವ ನೆಲೆಯಾಗಿದ್ದ ಮೇಲುಕೋಟೆಯ ಶ್ರೀ ಚೆಲುವ ನಾರಾಯಣನಿಗೆ ರಾಜಮುಡಿಯನ್ನು ಮಾಡಿ ಅರ್ಪಿಸಿ ತಮ್ಮ ಹೆಸರಿನಲ್ಲಿ ಅನೇಕ ಸೇವಾ ಕೈಂಕರ್ಯಗಳನ್ನು ನಡೆಸುವಂತೆ ಅಪ್ಪಣೆ ಮಾಡಿದರು. ಹಾಗೆಂದ ಮಾತ್ರಕ್ಕೆ ಮೂಲದಿಂದ ಬಂದ ಧರ್ಮವನ್ನು ಸಂಪೂರ್ಣವಾಗಿ ಕೈಬಿಟ್ಟರೆಂದು ಭಾವಿಸಲಾಗದು. ದೊಡ್ಡ ದೇವರಾಜರು ತಿರುಪತಿಯಿಂದ ಪರಕಾಲ ಮಠದ ಯತಿಗಳನ್ನು ಕರೆಸಿ, ಶ್ರೀರಂಗಪಟ್ಟಣದಲ್ಲಿ ಅವರಿಗೆ ಮಠ ಮಾನ್ಯಗಳನ್ನು ಮಾಡಿಕೊಟ್ಟರು. ಅಂದಿನಿಂದ ಪರಕಾಲ ಮಠದ ಗುರುಗಳು ರಾಜ ಗುರುಗಳಾದರು. ಚಿಕ್ಕ ದೇವರಾಜರಿಗೆ ಶ್ರೀ ವೈಷ್ಣವ ಧರ್ಮದ ಮೇಲೆ ಸ್ವಲ್ಪ ಹೆಚ್ಚು ಅಭಿಮಾನವಿದ್ದಂತೆ ತೋರುತ್ತದೆ. ಅವರು ಅರಸುಗಳನ್ನು ಶ್ರೀ ವೈಷ್ಣವರನ್ನಾಗಿ ಮಾಡಬೇಕೆಂಬ ಅಭಿಲಾಷೆಯಿಂದ, ಅರಸುಗಳನ್ನು ಅರಮನೆಗೆ ಕರೆಸಿ, ಪರಕಾಲ ಮಠದ ಯತೀಂದ್ರರ ಕೈಯಲ್ಲಿ ಮುದ್ರಾ ಧಾರಣೆ ಮಾಡಿಸಿ, ದೀಕ್ಷೆಯನ್ನು ಕೊಡಿಸಿದರು. ಆದರೆ ಸ್ವಲ್ಪ ದಿನಗಳ ನಂತರ ಅರಸುಗಳು ತಮ್ಮ ಮನೆದೇವರುಗಳಿಗೆ, ಊರ ದೇವರುಗಳಿಗೆ ಸಲ್ಲಿಸಬೇಕಾದ ಪೂಜಾ ಕೈಂಕರ್ಯಗಳನ್ನು ಬಿಟ್ಟಿದ್ದರಿಂದ ಅವರಿಗೆ ಕೆಟ್ಟ ಸ್ವಪ್ನಗಳು ಮತ್ತು ಶಕುನಗಳುಂಟಾಗಿ ಭಯಭೀತರಾದರು. ನಂತರ ಮಹಾರಾಜರಲ್ಲಿಗೆ ಬಂದು ತಮ್ಮ ಕಷ್ಟವನ್ನು ನಿವೇದಿಸಿಕೊಳ್ಳಲಾಗಿ, ತಮ್ಮ ಮೂಲ ಧರ್ಮವನ್ನು ಬಿಡಲಾರೆವೆಂದು ಹೇಳಲಾಗಿ, ಚಿಕ್ಕದೇವರಾಜರು ಶ್ರೀ ವೈಷ್ಣವ ಧರ್ಮವನ್ನು ಬಿಟ್ಟುಕೊಟ್ಟು, ನಿಮ್ಮ ಮೂಲಧರ್ಮದ ಸಂಪ್ರದಾಯಗಳನ್ನು ಅನುಸರಿಸಿ ಎಂಬ ಆಜ್ಞೆ ಮಾಡಿದರು. ಇದು ಅರಸುಗಳು ಸಂಪೂರ್ಣವಾಗಿ ವೈದಿಕ ಸಂಪ್ರದಾಯದವರಲ್ಲ ಎನ್ನುವುದಕ್ಕೆ ಉತ್ತಮ ಉದಾಹರಣೆ. ಇದೇ ಈ ನೆಲದ ಸಂಸ್ಕೃತಿ.

ಅರಸುಗಳು ವೈದಿಕ ಸಂಪ್ರದಾಯದಂತೆ ಶೋಡಷ ಸಂಸ್ಕಾರಗಳನ್ನು ಆಚರಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಅವರು ಪರಿಪೂರ್ಣ ವೈದಿಕರಾಗಲಾರರು. ಮೂಲದಿಂದ ಆಚರಿಸಿಕೊಂಡು ಬಂದ ಹಲವು ಸಂಪ್ರದಾಯಗಳಿಗೆ ವೈದಿಕ ಸಂಪ್ರದಾಯದಲ್ಲಿ ಸ್ಥಳವಿಲ್ಲ. ಮದುವೆಗಳಲ್ಲಿ ದೇವರು ತರುವುದು, ಲಿಂಗಧೀರರನ್ನು ಕರೆಸುವುದು, ಮಾರಮ್ಮನ ತಂಪು, ಗದ್ದಿಗೆ ಅಮ್ಮನ ಪೂಜೆ, ಮೂಗುರು ತಿಬ್ಬಾದೇವಿ ಪೂಜೆ, ಶ್ರಾದ್ಧಗಳನ್ನು ಮಾಡುವಾಗ ಕಳಶಪೂಜೆ ಮುಂತಾದವುಗಳು ಸ್ಥಳೀಯ ಆಚರಣೆಗಳಷ್ಟೆ. ಗ್ರಾಮಾಂತರ ಪ್ರದೇಶದ ಅರಸುಗಳ ಸಂಪ್ರದಾಯಗಳು ಗ್ರಾಮದ ಇತರೆ ಜನತೆಯ ಸಂಪ್ರದಾಯಗಳನ್ನು ಹೋಲುತ್ತವೆ. ಆಯಾಯಾ ಗ್ರಾಮದ ದೇವತೆಗಳು ಕೆಲವು ಅರಸುಗಳ ಮನೆದೇವರಾಗಿರುವುದು ಉಂಟು. ಬಹಳಷ್ಟು ಸಂಖ್ಯೆ ಅರಸುಗಳ ಮನೆದೇವರುಗಳು ಶಿಷ್ಟ ದೇವರುಗಳಲ್ಲ. ಹೆಚ್ಚಿನ ಜನ ಶಿವಭಕ್ತರು. ಇವರಿಗೆ ಹರಿಹರರಲ್ಲಿ ಭೇದವಿಲ್ಲ. ಇಬ್ಬರೂ ಸಮಾನರು.
ಮೈಸೂರಿನ ರಾಜರ ಆಶ್ರಯಕ್ಕೆ ಬಂದ ಅರಸುಗಳಲ್ಲಿ ಹೆಚ್ಚು ಶಿಷ್ಟತನ ಕಂಡು ಬರುತ್ತದೆ. ಇದು ರಾಜಾಶ್ರಯದ ಹಾಗೂ ಪಟ್ಟಣ ವಾಸದ ಸಹಜ ಪ್ರಕ್ರಿಯೆ. ಮದುವೆಯಲ್ಲಿ ವರನಿಗೆ ಲಾಂಗ್‍ಕೋಟು, ಷರಾಯಿ ಹಾಕುತ್ತಾರೆ. ಇದೇನು ವೈದಿಕ ಸಂಪ್ರದಾಯವೇ? ಪಟ್ಟಣವಾಸಿ ಅರಸುಗಳಲ್ಲಿ ವೈದಿಕಧರ್ಮದ ಡಾಂಭಿಕತೆ ಹೆಚ್ಚು ಕಂಡು ಬರುತ್ತದೆ. ಆದರೆ ಆಂತರ್ಯದಲ್ಲಿ ಅವರೂ ಕೂಡ ದೇಸಿ ಸಂಪ್ರದಾಯದವರೇ

ಈ ಮೇಲಿನ ಅಂಶಗಳೊಂದಿಗೆ ಸಮಾಲೋಚಿಸಿದಾಗ ಅರಸುಗಳು ಆದಿಯಿಂದ ಬಂದ ಸಂಪ್ರದಾಯಗಳೊಂದಿಗೆ, ಕಾಲ ಕಾಲಕ್ಕೆ ಬಂದು ಶೈವ, ವೈಷ್ಣವ, ವೀರಶೈವ, ಜೈನ ಮೊದಲಾದ ಧರ್ಮಗಳ ಹಾಗೂ ನೈಸರ್ಗಿಕ ಧರ್ಮಗಳ ಸಾರವನ್ನು ವಿಶಾಲ ಹೃದಯದಿಂದ ಮೈಗೂಡಿಸಿಕೊಂಡು, ಅವುಗಳನ್ನು ಗೌರವಿಸಿ, ಆಧರಿಸಿ, ಬೆಳೆಸಿದರು. ಅರಸುಗಳು ಯಾವುದೇ ಕಾಲದಲ್ಲೂ ಯಾವುದೇ ಧರ್ಮದ ದ್ಯೋತಕವನ್ನು ಹಿಡಿದು ಅದಕ್ಕಾಗಿ ಹೋರಾಡಿದವರಲ್ಲ. ಸರ್ವಧರ್ಮಗಳನ್ನು ಗೌರವಿಸಿ, ನಿಜವಾದ ಅರ್ಥದಲ್ಲಿ ಧರ್ಮ ಸಮನ್ವಯವನ್ನು ಸಾಧಿಸಿ, ಹಿಂದು ಸಂಸ್ಕೃತಿಯ ಬೆಳವಣಿಗೆಗೂ, ಸಾಮಾಜಿಕ ಭದ್ರತೆಗೂ ಕಾರಣರಾದರು.

ಅರಸು ಜನಾಂಗ ಬೆಳೆದು ಬಂದ ಹಾದಿ – ಭಾರತಿ ಅರಸ್

ಧರ್ಮ

ಅರಸು ಜನಾಂಗ ಹಿಂದೂ ಧರ್ಮಾನುಯಾಯಿಗಳು. ಇವರಲ್ಲಿ ಶೈವ ಸಂಪ್ರದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವೈಷ್ಣವ ಸಂಪ್ರದಾಯವನ್ನು ಅನುಸರಿಸುವ ಕೆಲವರು ಇದ್ದಾರೆ. ರಾಜ ಒಡೆಯರ್ ಕಾಲದಲ್ಲಿ ಅರಸು ಜನಾಂಗದವರು ವೈಷ್ಣವ ಸಂಪ್ರದಾಯವನ್ನು ಅನುಸರಿಸಬೇಕೆಂದು ನಿಬಂಧನೆಯನ್ನು ಮಾಡಲಾಯಿತು. ಸ್ವಲ್ಪ ಕಾಲ ಅದರಂತೆ ವೈಷ್ಣವ ಸಂಪ್ರದಾಯವನ್ನು ಅನುಸರಿಸಲಾಯಿತು. ಆದರೆ ಅನೇಕರ ಮನೆಯಲ್ಲಿ ತೊಂದರೆ ಉಂಟಾದ ಕಾರಣ ಮತ್ತೆ ಮೈಸೂರಿನ ರಾಜರ ಅಪ್ಪಣೆ ಪಡೆದು ತಲಾಂತರದಿಂದ ಅನುಸರಿಸುತ್ತಿದ್ದ ಶೈವ ಸಂಪ್ರದಾಯವನ್ನು ಅನೇಕರು ಅನುಸರಿಸಲು ಪ್ರಾರಂಭಿಸಿದರು. ಜೈನಧರ್ಮಕ್ಕೆ ಸೇರಿದ ಕೆಲವರು ಈ ಜನಾಂಗದಲ್ಲಿದ್ದಾರೆ. ಶಿವ ಮತ್ತು ವಿಷ್ಣುವನ್ನು ಸಮಾನ ಭಕ್ತಿಯಿಂದ ಇವರು ಪೂಜಿಸುತ್ತಾರೆ. ಈ ಜನಾಂಗದವರು ಯಾವ ‘ಮಠದ’ ಅನುಯಾಯಿಗಳಲ್ಲ.
ಅರಸು ಮಠಾಧಿಪತಿಗಳನ್ನು ಹೊಂದಿರುವ ಮಳವಳ್ಳಿ ಮಠ ಮತ್ತು ಬೊಪ್ಪಗೌಡನಪುರದಲಿ ಮಠಗಳಿವೆ. ಈ ಮಠಗಳು ಶೈವ ಮಠಗಳು. ಈ ಮಠಾಧಿಪತಿಗಳು ಕಪ್ಪಡಿ, ಚಿಕ್ಕಲ್ಲೂರು ಮತ್ತು ಬೊಪ್ಪಗೌಡನಪುರದಲ್ಲಿ ಜಾತ್ರೆ ನಡೆಸುತ್ತಾರೆ. ಕೆ. ಆರ್. ನಗರದ ಬಳಿಯಿರುವ ಕಪ್ಪಡಿಯಲ್ಲಿ ರಾಚಪ್ಪಾಜಿ ಗದ್ದುಗೆ ಇದೆ. ಇಲ್ಲಿ ಶಿವರಾತ್ರಿ ದಿನ ಜಾತ್ರೆ ಪ್ರಾರಂಭವಾಗಿ ಇಪ್ಪತ್ತೈದು ದಿನಗಳ ಕಾಲ ಉತ್ಸವ ನಡೆಯುತ್ತದೆ. ಈ ಜಾತ್ರೆಯಲ್ಲಿ ಒಂದು ವರ್ಷ ಬೊಪ್ಪನಗೌಡಪುರದ ಸ್ವಾಮಿಗಳು ನಡೆಸಿದರೆ ಇನ್ನೊಂದು ವರ್ಷ ಮಳವಳ್ಳಿ ಸ್ವಾಮಿಗಳು ನಡೆಸುತ್ತಾರೆ. ಮಳವಳ್ಳಿ ಪೀಠಾಧಿಪತಿಗಳಾಗಿದ್ದ ದಿವಂಗತ ಸರದಾರ್ ಎಂ.ಎಲ್. ರಾಜೇ ಅರಸ್ ಅವರು ಕಪ್ಪಡಿ ಕ್ಷೇತ್ರದಲ್ಲಿ ರಾಚಪ್ಪಾಜಿ ಮತ್ತ್ತು ಚೆನ್ನಾಜಮಣ್ಣಿಯವರ ಗದ್ದುಗೆಗಳಿಗೆ ದೇವಸ್ಥಾನಗಳನ್ನು ಕಟ್ಟಿಸಿದ್ದರು. ಬೊಪ್ಪಗೌಡನಪುರದಲ್ಲಿ ಯುಗಾದಿ ಅಮವಾಸ್ಯೆಯ ದಿನ ಜಾತ್ರೆ ನಡೆಯುತ್ತದೆ. ಇಲ್ಲಿ ಮಂಠೇಸ್ವಾಮಿಯ ಗದ್ದುಗೆಯಿದೆ. ಚಿಕ್ಕಲ್ಲೂರಿನಲ್ಲಿ ಸಿದ್ದಾಪ್ಪಜಿಯವರ ಗದ್ದುಗೆಯಿದೆ. ಸಂಕ್ರಾಂತಿ ಸಮಯದಲ್ಲಿ ಚಿಕ್ಕಲ್ಲೂರಿನ ಜಾತ್ರೆ ನಡೆಯುತ್ತದೆ.

ಹಬ್ಬಗಳು

ಎಲ್ಲಾ ಹಿಂದು ಹಬ್ಬಗಳನ್ನು ಈ ಜನಾಂಗದವರು ಆಚರಿಸುತ್ತಾರೆ. ಆದರೆ ಗೌರಿ ಹಬ್ಬ ಇವರಿಗೆ ವಿಶೇಷವಾದ ಹಬ್ಬ. ಪ್ರತಿ ಮನೆಯಲ್ಲಿ ಗೌರಿಯನ್ನು ಕೂರಿಸುತ್ತಾರೆ. ಹಬ್ಬಕ್ಕೆ ಮೊದಲು ಒಂದು ಒಳ್ಳೆಯ ದಿನ ನೋಡಿ ಮಂಗಳದ್ರವ್ಯವನ್ನು ಅಂಗಡಿಯಿಂದ ತಂದು, ಅದಕ್ಕೆ ಪೂಜೆ ಮಾಡಲಾಗುತ್ತದೆ. ಅನಂತರ ಹಬ್ಬಕ್ಕೆ ಮೊದಲು ತಮ್ಮ ಸಂಬಂಧಿಕರ ಮನೆಗೆ ಪೂಜಾ ಸಾಮಗ್ರಿಗಳನ್ನು ಕೊಡುತ್ತಾರೆ. ಇದಕ್ಕೆ’ಅರಿಷಿನ ಕುಂಕುಮ ಕೊಡುವುದು’ ಎನ್ನುತ್ತಾರೆ. ಗೌರಿ ಹಬ್ಬದ ಹಿಂದಿನ ದಿನ ಬಳೆಯ ಮಲ್ಲಾರಕ್ಕೆ ಪೂಜೆ ಮಾಡಿ ಸುಮಂಗಲಿಯರು ಹಸಿರು ಬಳೆಯನ್ನು ತೊಡುತ್ತಾರೆ. ಮೊರದ ಬಾಗಿನವನ್ನು ಕಟ್ಟುತ್ತಾರೆ. ಮಾರನೇ ದಿನ ಪುರೋಹಿತರು ಗೌರಿಯನ್ನು ತಂದಾಗ ಗೌರಿಕೆ ಆರತಿ ಮಾಡಿ ಸಕಲ ಮರ್ಯಾದೆಯೊಡನೆ ಗೌರಿಯನ್ನು ಆಹ್ವಾನಿಸಿ ಮಂಟಪದಲ್ಲಿಟ್ಟು ಪೂಜಿಸುತ್ತಾರೆ. ಸ್ವರ್ಣ ಗೌರಿವ್ರತದ ಮಾರನೆ ದಿನ ವರಸಿದ್ಧಿ ವಿನಾಯಕನ ವ್ರತ ಆಚರಿಸುತ್ತಾರೆ. ದಸರಾ ಹಬ್ಬದಲ್ಲಿ ಅನೇಕರ ಮನೆಯಲ್ಲಿ ವಿಶೇಷ ಪೂಜೆಗಳು ಅಂದರೆ ರಾಮಾಯಣ ಪಾರಾಯಣ ದೇವಿ ಅರಾಧನೆ ನಡೆಯುತ್ತವೆ.

ವಿವಾಹ

ವರದಕ್ಷಿಣೆಯ ಪದ್ಧತಿಯನ್ನೇ ಹೊಂದಿಲ್ಲದ ಅರಸು ಕುಟುಂಬಗಳಲ್ಲಿ ವರನ ಕಡೆಯವರು ವಧುವನ್ನು ಅರಸಿ ಹೋಗುತ್ತಾರೆ. ಹಿರಿಯರು ತೀರ್ಮಾನಿಸಿ ನಡೆಸುವ ವಿವಾಹಗಳೇ ಹೆಚ್ಚು. ಮದುವೆ ನಿಶ್ಚಿತಾರ್ಥವನ್ನು ‘ಹೆಣ್ಣು ಕೇಳುವ ಶಾಸ್ತ್ರ’ ಎಂದು ಹೇಳಲಾಗುತ್ತದೆ. ಅಂದು ಗಂಡಿನ ಕಡೆಯಿಂದ ಐದು ಜನ ಮುತ್ತೈದೆಯರು ಹೆಣ್ಣಿನ ಮನೆಗೆ ಹೋಗಿ, ಹೆಣ್ಣಿಗೆ ಕುಂಕುಮವಿಟ್ಟು ಹೊಸ ಸೀರೆ, ಆಭರಣಗಳನ್ನು ಕೊಡುತ್ತಾರೆ. ಹುಡುಗಿಗೆ ಆರತಕ್ಷತೆ ಮಾಡಿದ ಮೇಲೆ ಗಂಡಿನವರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಬಾಳೆ ಎಲೆ ಹಾಕಿ, ಎಲೆ ತುದಿಗೆ ತೊವ್ವೆ ಪಾಯಸ ಮಾಡಿದ ಅಡಿಗೆ ಬಡಿಸುತ್ತಾರೆ. ಊಟದ ಪ್ರಾರಂಭಕ್ಕೆ ಹಾಲು ಅನ್ನ, ಸಕ್ಕರೆ, ಬಾಳೆ ಹಣ್ಣನ್ನು ಬಡಿಸುತ್ತಾರೆ. ಹಾಲನ್ನು ಕೈಯಲ್ಲಿ ಹಿಡಿದು ಹುಡುಗನ ಕಡೆಯ ಹಿರಿಯ ಮುತ್ತೈದೆ ‘ನಿಮ್ಮ ಹೆಣ್ಣನ್ನು ಕೊಟ್ಟು ನಮ್ಮ ಮನೆಯನ್ನು ಬೆಳಕು ಮಾಡಬೇಕು’ ಎಂದು ವಿನಂತಿ ಮಾಡುತ್ತಾರೆ. ಅನಂತರ ಊಟ ಪ್ರಾರಂಭವಾಗುತ್ತದೆ. ಲಗ್ನಪತ್ರಿಕೆ ಶಾಸ್ತ್ರ ನಡೆಯುತ್ತದೆ. ಸಾಮಾನ್ಯವಾಗಿ ಎರಡು ದಿನಗಳ ವಿವಾಹ ಕಾರ್ಯಕ್ರಮ ಇರುತ್ತದೆ. ಧಾರೆಯ ಹಿಂದಿನ ದಿನ ಮದು ಮಕ್ಕಳು ಛತ್ರಕ್ಕೆ ತೆರಳುತ್ತಾರೆ. ನಾಂದಿ, ಸ್ಥಂಭ ಮುಹೂರ್ತ, ಗೋದಿಕಲ್ಲು ಮತ್ತು ಉದ್ದಿನಕಲ್ಲು ಶಾಸ್ತ್ರ ನಡೆಯುತ್ತದೆ. ವಧು ಮತ್ತು ವರನ ಮನೆಗಳಲ್ಲಿ “ಕಡಗಬಳೆ” ಶಾಸ್ತ್ರ ಮಾಡಲಾಗುತ್ತದೆ ಸಂಜೆ ದೇವರನ್ನು ತರುತ್ತಾರೆ. ಈ ಸಂದರ್ಭದಲ್ಲಿ ಲಿಂಗಧೀರನ ಕುಣಿತವು ಇರುತ್ತಎ.

ಒಂದು ವೇಳೆಗ ವರನ ಉಪನಯವಾಗದಿದ್ದರೆ, ಧಾರೆಯ ದಿನ ಬೆಳಿಗ್ಗೆ ಉಪನಯನ ನಡೆಯುತ್ತದೆ. ಸಮಾವರ್ತನೆ, ಕಾಶಿಯಾತ್ರೆ ನಡೆದು ಮುಹೂರ್ತಕ್ಕೆ ಸರಿಯಾಗಿ ವರನು ಮದುವೆ ಮಂಟಪಕ್ಕೆ ಬರುತ್ತಾನೆ. ಧಾರೆ ಮಂಟಪಕ್ಕೆ ಲಕ್ಷ್ಮಿ ಪಟವನ್ನು ಕಟ್ಟಿರುತ್ತಾರೆ. ಧಾರೆಯ ಕಾಲದಲ್ಲಿ ವರನು ಷರಾಯಿ ಲಾಂಗ್‍ಕೋಟ್‍ನಲ್ಲಿ ಪೇಟ ಧರಿಸಿ ಬರುತ್ತಾನೆ. ಅವನ ಕೈಯಲ್ಲಿ ಕೆಂಪು ರೇಷ್ಮೆ ಬಟ್ಟೆಯಲ್ಲಿ ಸುತ್ತಿರುವ ನಿಂಬೆಹಣ್ಣು ಚುಚ್ಚಿದ ಕಠಾರಿ ಇರುತ್ತದೆ. ವರನನ್ನು ಮದುವೆ ಮಂಟಪಕ್ಕೆ ಮಂಗಳವಾದ್ಯ ಸಮೇತವಾಗಿ ಕರೆತರಲಾಗುತ್ತದೆ. ವಧುವಿನ ತಂದೆ ವರನ ಕಾಲು ತೊಳೆದು, ಚಿನ್ನದ ಜನಿವಾರ ಮತ್ತು ಉಂಗುರವನ್ನು ಕೊಡುತ್ತಾನೆ. ಅತ್ತ ಇದೇ ಸಮಯದಲ್ಲಿ ವಧು ಗೌರಿ ಪೂಜೆಯನ್ನು ಮಾಡುತ್ತಿರುತ್ತಾಳೆ.

ವಧುವಿನ ಅಲಂಕಾರ ಕಲಾತ್ಮಕವಾಗಿರುತ್ತದೆ. ಹೊಸ ಸೀರೆ ಉಡಿಸಿ, ಕಿವಿಗೆ ಓಲೆ, ಬೆಳೆತುಂಬವಾಲೆ ಸರ ಬುಗುಡಿ ಹಾಕಿರುತ್ತಾರೆ. ಮೂಗುತಿ ಬೈತಲೆಗೆ ಬೈತಲೆಬೊಟ್ಟು, ಬೈತಲೆಯ ಅಕ್ಕಪಕ್ಕ ಸೂರ್ಯ, ಚಂದ್ರ, ಜಡೆಗೆ ಬಂಗಾರದ ಜಡೆಸರ್ ಕುಚ್ಚು ಹಾಕಿರುತ್ತಾರೆ. ತೋಳಿಗೆ ತೋಳಬಂದಿ, ಕೈಗೆ ಬಂಗಾರದ ಬಳೆಗಳು, ಕಾಲಿಗೆ ಚಿನ್ನದ ಕಾಲುಸರ, ನಡುವಿಗೆ ಡಾಬು, ಇತ್ಯಾದಿ ಹಾಕಲಾಗಿರುತ್ತದೆ. ಕೆನ್ನೆಗೆ ಅರಿಷಿಣ ಲೇಪಿಸಿರುತ್ತಾರೆ. ಗೌರಿಪೂಜೆ ಅನಂತರ ಸೋದರ ಮಾವನ ಜೊತೆ ಮದುವೆ ಮಂಟಪಕ್ಕೆ ವಧು ಬರುತ್ತಾಳೆ. ಅಂತರ ಪಟ ಸರಿಸಿದ ನಂತರ ವಧುವರರು ಪರಸ್ಪರ ಜೀರಿಗೆ ಬೆಲ್ಲ ಹಾಕುತ್ತಾರೆ. ಹಾರ ಬದಲಾಯಿಸುತ್ತಾರೆ. ಕನ್ಯಾದಾನದ ಸಮಯದಲ್ಲಿ ಕನ್ಯಾದಾನಕ್ಕೆ ವಧುವಿನ ತಂದೆ ಸಭೆಯಿಂದ ಅಪ್ಪಣೆ ಪಡೆಯುತ್ತಾನೆ. ಮಾಂಗಲ್ಯಧಾರಣೆ, ಲಾಜಾ, ಹೋಮ, ಸಪ್ತಪದಿ ಇತ್ಯಾದಿ ಕಾರ್ಯ ಕ್ರಮಗಳು ನಡೆಯುತ್ತವೆ. ದೃಷ್ಟಿ ತೆಗೆದು, ಆರತಿ ಮಾಡಿದರೆ ಧಾರೆಯ ಕಾರ್ಯಕ್ರಮ ಮುಗಿಯುತ್ತದೆ. ಸಂಜೆ ಉರುಟುಣೆ, ನಾಗವಲ್ಲಿ ಶಾಸ್ತ್ರ, ಮದುಮಗಳನ್ನು ಮನೆತುಂಬಿಕೊಳ್ಳುವ ಶಾಸ್ತ್ರ ನೆರವೇರುತ್ತದೆ. ಮದುವೆ ಮಂಟಪದ ಅಲಂಕಾರ ಅದರ ಮುಂದಿರಿಸಿರುವ ಶಾಸ್ತ್ರದ ಸಾಮಾನುಗಳ ಜೋಡಣೆಯ ಅಚ್ಚುಕಟ್ಟು, ಮದುವೆಯ ವಿಶೇಷ ಎಂದೆನ್ನಬಹುದು.

ಉಜ್ವಲ ಇತಿಹಾಸ ಪರಂಪರೆಯನ್ನು ಮೈಗೂಡಿಸಿಕೊಂಡು ಕರ್ನಾಟಕ ಚರಿತ್ರೆಯ ಒಂದಂಗವಾಗಿರುವ ಅರಸು ಮನೆತನಗಳು ಇಂದು ಪ್ರವೇಶಿಸಿದ ಕ್ಷೇತ್ರವೇ ಇಲ್ಲ. ಸಂಖ್ಯೆಯಲ್ಲಿ ಕಿರಿದಾದರೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಹಿರಿದಾದ ಜನಾಂಗ, ಅರಸು ಜನಾಂಗ.