ಅರಸು ಅಸೋಸಿಯೇಷನ್ (ರಿ.), ಬೆಂಗಳೂರು

ಬೆಂಗಳೂರು ಕರ್ನಾಟಕದ ರಾಜಧಾನಿಯಾಗಿ ಕೈಗಾರಿಕಾ ನಗರವಾಗಿ ಬೆಳವಣಿಗೆಯನ್ನು ಕಾಣಲಾರಂಭಿಸಿದಂತೆ ಮತ್ತು ಉದ್ಯೋಗವಕಾಶಗಳು ಹೆಚ್ಚಿದಂತೆ ಅರಸು ಜನಾಂಗದವರು ಕೂಡ ಇಲ್ಲಿ ನೆಲೆಸಲಾರಂಭಿಸಿದರು. ಅರಸುಗಳ ಸಂಖ್ಯೆಯು ಹೆಚ್ಚಿದಂತೆ ಸಂಘದ ಅಗತ್ಯವು ಕಂಡುಬಂದಿತು. ಅರಸು ಸಂಘದ ಸ್ಥಾಪನೆಗೆ 1958 ರಷ್ಟು ಹಿಂದೆಯೇ ಶ್ರೀಯುತರಾದ ಹೆಚ್. ರಾಮರಾಜೇ ಅರಸು, ಹೆಚ್. ಚಿಕ್ಕೇ ಅರಸ್, ಬಿ. ಕೆ. ಚನ್ನರಾಜೇ ಅರಸ್, ಎಸ್. ಸುಬ್ಬರಾಜೇ ಅರಸ್ ಮತ್ತಿತರು ಮತ್ತು 1965 ರಲ್ಲಿ ಶ್ರೀಯುತರಾದ ಪಿ. ವಿ. ಕೃಷ್ಣ ಅರಸ್, ಕೆ. ಕೆಂಪರಾಜೇ ಅರಸ್, ಜಿ. ಎಸ್. ಪುಟ್ಟರಾಜೇ ಅರಸ್, ಎಂ.ಪಿ. ನಂಜರಾಜೇ ಅರಸ್ ರವರು ಪ್ರಯತ್ನಪಟ್ಟರು ಸಹ, ಸಂಘವು ರೂಪುಗೊಂಡಿದ್ದು 1972 ರಲ್ಲಿ ಶ್ರಿ. ಡಿ. ದೇವರಾಜೇ ಅರಸುರವರು ಮುಖ್ಯಮಂತ್ರಿಗಳಾದಾಗ ಮಾತ್ರ. ಅವರ ಒತ್ತಾಯ ಮತ್ತು ಸಹಕಾರದಿಂದ ಅರಸು ಅಸೋಸಿಯೇಷನ್ (ರಿ.), ಬೆಂಗಳೂರು, ದಿನಾಂಕ 16-06-74 ರಂದು ಅಸ್ತಿತ್ವಕ್ಕೆ ಬಂದಿತು.

ಸ್ವಲ್ಪ ಪ್ರಮಾಣದಲ್ಲಿ ಆರಂಭಗೊಂಡ ಅಸೋಸಿಯೇಷನ್ ಹಲವಾರು ಅರಸು ಮಹನೀಯರ ಮತ್ತು ಪದಾಧಿಕಾರಿಗಳ ನಿಸ್ಪೃಹ ಸೇವೆಯಿಂದ ಇಂದು ಬೃಹದಾಕಾರವಾಗಿ ಬೆಳೆದು ಸಾಕಷ್ಟು ಪ್ರಗತಿಯನ್ನು ಕಂಡು ಇಂದು ಸುಮಾರು 1,500 ಸದಸ್ಯರನ್ನು ಹೊಂದಿದ್ದು, 15,300 ಚ. ಅ. ನಿವೇಶನದಲ್ಲಿ ತನ್ನದೇ ಆದ ಭವನವನ್ನು ಹೊಂದಿದೆ. ಭವನವನ್ನು ಮದುವೆ/ಸಮಾರಂಭಗಳಿಗೆ ನೀಡಲಾಗುತ್ತಿದ್ದು, ಸದಸ್ಯರಿಗೆ ಬಾಡಿಗೆಯಲ್ಲಿ ಶೇ. 50 ರಿಯಾಯತಿ ನೀಡಲಾಗುತ್ತಿದೆ. ಸದಸ್ಯರ ಸಹಕಾರದಿಂದ ವಿದ್ಯಾನಿಧಿಯನ್ನು ಹೊಂದಿದ್ದು, ಪ್ರತಿ ಸಾಲಿನಲ್ಲಿ ನಡೆದ ಸಾರ್ವತ್ರಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರಶಸ್ತಿ/ಬಹುಮಾನಗಳನ್ನು ನೀಡುವುದಲ್ಲದೆ ರ್ಯಾಂಕ್ ವಿಜೇತರನ್ನು ಸನ್ಮಾನಿಸಲಾಗುತ್ತಿದೆ. ಪ್ರತಿವರ್ಷ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಆಚರಿಸುವುದರ ಜೊತೆಗೆ ವಾರ್ಷಿಕೋತ್ಸವ/ಸಂತೋಷಕೂಟ ಸಮಾರಂಭಗಳನ್ನು ಏರ್ಪಡಿಸಿ ಸದಸ್ಯರು ಮತ್ತು ಕುಟುಂಬದವರಿಗೆ ಕ್ರೀಡಾ, ಸಂಗೀತ ಇತ್ಯಾದಿ ಸ್ಪರ್ಧೆಗಳನ್ನು ಏರ್ಪಡಿಸಿ ಸಮಾರಂಭಗಳಲ್ಲಿ ಸಮಾಜದ ಗಣ್ಯ ವ್ಯಕ್ತಿಗಳನ್ನು ಸನ್ಮಾನಿಸಲಾಗುತ್ತಿದೆ.

ಬೆಂಗಳೂರು ಜಿಲ್ಲೆಯ ಸಮಸ್ತಅರಸುಗಳ ಸರ್ವೇಕ್ಷಣೆ ಮಾಡಿ ಮೈಸೂರು ಅರಸು ಮಂಡಲಿಯ ಜೊತೆಗೂಡಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಿ ಅಸೋಸಿಯೇಷನ್ ಅರಸು ಜನಾಂಗವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಮಾಡಿದ ಪ್ರಯತ್ನವು ಸಫಲವಾಗಿರುತ್ತದೆ. ಶ್ರೀಮತಿ ಚಂದ್ರಪ್ರಭಾ ಅರಸ್‍ರವರ ಸಮರ್ಥ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಅರಸು ಅಸೋಸಿಯೇಷನ್ ನೂತನ ಕಟ್ಟದ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಇಂದಿನ ಬದಲಾದ ರಾಜಕೀಯ, ಸಾಮಾಜಿಕ ಹಿನ್ನೆಲೆಯಲ್ಲಿ ಅರಸು ಜನಾಂಗ ಒಂದು ಸಂಘಟನಾ ಶಕ್ತಿಯಾಗಿ ಬೆಳೆಯುವ ಅವಶ್ಯಕತೆಯಿದೆ. ವ್ಯಕ್ತಿಗಳಿಗೆ ಸೀಮಿತವಾಗಿರುವ ಬುದ್ಧಿಶಕ್ತಿ, ಚತುರತೆ ಮತ್ತು ಧೀಮಂತತೆಗಳು ಒಂದು ಕೇಂದ್ರ ಬಿಂದುವಾಗಿ ಪ್ರಬಲ ಶಕ್ತಿಯಾಗಿ ಬೆಳೆಯಬೇಕಾಗಿದೆ. ಈ ಶಕ್ತಿಗಳ ಕ್ರೋಡೀಕರಣ ಆಗಬೇಕಿದೆ. ಜನಾಂಗದ ಕೊಡುಗೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಹಮ್ಮಿಕೊಳ್ಳಬೇಕಾಗಿದೆ. ಜನಾಂಗ ಆರ್ಥಿಕವಾಗಿ ಬಲಗೊಳ್ಳಬೇಕಾಗಿದೆ. ನಮ್ಮ ಜನಾಂಗದಂತೆಯೇ ಅತ್ಯಂತ ಅಲ್ಪಸಂಖ್ಯಾತರಾಗಿರುವ ಪಾರ್ಸಿ ಜನಾಂಗದಂತೆ ವ್ಯವಹಾರ ಚತುರತೆ, ಕೈಗಾರಿಕೆ ಮತ್ತು ಇನ್ನಿತರ ಆರ್ಥಿಕ ಬೆಳವಣಿಗೆಯಲ್ಲಿ ಒಂದು ಸಂಘಟನಾ ಶಕ್ತಿಯಾಗಿ ತೊಡಗಿಸಿಕೊಳ್ಳಬೇಕಾಗಿದೆ. ಅಂತೆಯೇ ಕೊಡಗಿನ ಜನರಂತೆ ನಮ್ಮದೇ ಆದ ಶೈಲಿ, ಪದ್ಧತಿ, ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕಾಗಿದೆ. ಇಂತಹ ಕಾರ್ಯಗಳು ಸುಸೂತ್ರವಾಗಿ ಕಾರ್ಯಗತಗೊಳ್ಳಬೇಕಾದರೆ, ಇತರೆ ಜನಾಂಗಗಳಲ್ಲಿರುವಂತೆ ಎಲ್ಲರನ್ನು ಒಂದೆಡೆ ಸಂಘಟಿಸುವ ಶಕ್ತಿಯುತ ಧಾರ್ಮಿಕ ಸಂಸ್ಥೆ ಅಥವಾ ಮಠಗಳಂತಹ ಕೇಂದ್ರಗಳನ್ನು ಅಥವಾ ಇಡೀ ಜನಾಂಗವನ್ನು ಮುನ್ನಡೆಸುವಂತಹ ಸಮರ್ಥ ನಾಯಕನೊಬ್ಬನನ್ನು ಕಂಡುಕೊಳ್ಳಬೇಕಾಗಿದೆ. ಇದಲ್ಲದೆ, ಜನಾಂಗವನ್ನು ಪ್ರತಿನಿಧಿಸುವ ಸಂಘಗಳು ಕೇಂದ್ರಬಿಂದುವಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿ ಜನಾಂಗದ ಬೆಳವಣಿಗೆಗೆ ಶ್ರಮಿಸಬೇಕಾಗಿದೆ. ಸಮಾಜದಲ್ಲಿ ಜನಾಂಗದ ಅನಿವಾರ್ಯತೆಯನ್ನು ಸೃಷ್ಟಿಸಬೇಕಾಗಿದೆ. ಇದಕ್ಕೆಲ್ಲ ಸಂಘಟನಾ ಶಕ್ತಿಯೇ ಮೂಲಮಂತ್ರ ಆಗಬೇಕು. ‘ಅರಸು ಕೂಡಿ ಕೆಟ್ಟ’ ಎಂಬ ನಾಣ್ನುಡಿಯು ಸುಳ್ಳಾಗಿದೆ. ಇಂತಹ ಸಂಸ್ಥೆಗಳು ಮತ್ತು ಜನಾಂಗ ಸ್ವಪ್ರತಿಷ್ಠೆಯನ್ನು ಬದಿಗೊತ್ತಿ, ಪರಸ್ಪರ ಪೂರಕವಾಗಿ ಕೆಲಸ ಮಾಡಿದಲ್ಲಿ ಮಾತ್ರವೆ ಜನಾಂಗ, ಏಳಿಗೆಯನ್ನು ಕಾಣುವಲ್ಲಿ ಮತ್ತು ಸಮಾಜದಲ್ಲಿ ಶಕ್ತಿಯಾಗಿ ಬೆಳೆಯುವಲ್ಲಿ ಸಾಧ್ಯವಾಗಿರುತ್ತದೆ.